Monday, April 23, 2012

Katopanishad kannada ch-01 canto-2 shloka 01-03


ಅಧ್ಯಾಯ-೧

ವಲ್ಲೀ-೨

ನಚಿಕೇತನ ಅಧ್ಯಾತ್ಮನಿಷ್ಠೆ, ತಿಳಿಯಲೇಬೇಕು ಎನ್ನುವ ಛಲವನ್ನು ಕಂಡು ಯಮನಿಗೆ ಬಹಳ ಸಂತೋಷವಾಯಿತು. ಇಷ್ಟು ನಿಷ್ಪ್ರಹತೆಯಿಂದ ಕೇವಲ ಜ್ಞಾನಕ್ಕೋಸ್ಕರ ಜ್ಞಾನ ಬೇಕು', ಇನ್ನೇನೂ ಬೇಡ ಎನ್ನುವ ಇಂಥಹ ವಿದ್ಯಾರ್ಥಿಯನ್ನು ಕಂಡ ಯಮ ಬಹಳ ಸುಂದರವಾದ ಮಾತೊಂದನ್ನು ಹೇಳುತ್ತಾನೆ:

ಅನ್ಯಚ್ಛ್ರೇಯೋಽನ್ಯದುತೈವ ಪ್ರೇಯಸ್ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ
ತಯೋಃ ಶ್ರೇಯ ಆದದಾನಸ್ಯ ಸಾಧು  ಭವತಿ ಹೀಯತೇಽರ್ಥಾದ್ಯ ಉ ಪ್ರೇಯೋ ವೃಣೀತೇ

ಯಮ ಹೇಳುತ್ತಾನೆ: ಮನುಷ್ಯನನ್ನು ಮುಖ್ಯವಾಗಿ ಕಾಡುವ ಸಂಗತಿಗಳು ಎರಡು. ಒಂದು ಶ್ರೇಯಸ್ಸು ಹಾಗೂ ಇನ್ನೊಂದು ಪ್ರೇಯಸ್ಸು. ನಮಗೆ ಒಳಿತನ್ನುಂಟುಮಾಡುವುದು ಮತ್ತು ಹಿತವಾದದ್ದು ಶ್ರೇಯಸ್ಸು. ನಮಗೆ ಪ್ರಿಯವಾದದ್ದು  ಆದರೆ ನಶ್ವರವಾದದ್ದು ಪ್ರೇಯಸ್ಸು. ಉದಾಹರಣೆಗೆ ಒಬ್ಬ ಸಕ್ಕರೆ ಖಾಯಿಲೆಯುಳ್ಳ ರೋಗಿಗೆ ಕಹಿ ಮದ್ದು ಶ್ರೇಯಸ್ಸು, ಆದರೆ ಸಿಹಿ ತಿಂಡಿ ಪ್ರೇಯಸ್ಸು. ಈ ಶ್ರೇಯಸ್ಸು ಮತ್ತು ಪ್ರೇಯಸ್ಸು ಮನುಷ್ಯನನ್ನು ಕಟ್ಟಿಹಾಕುತ್ತವೆ. ಮನುಷ್ಯ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ದ್ವಂದ್ವದಲ್ಲಿ ಬದುಕುತ್ತಾನೆ. ಕೆಲವರು ಶ್ರೇಯಸ್ಸಿನ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಸುಖಮಯವಾದ ಮೊಕ್ಷಾಂತವಾದ ಫಲ ಸಿಗುತ್ತದೆ. ಇದನ್ನು ಬಿಟ್ಟು ಚಪಲಕ್ಕೆ ಬಿದ್ದು ಶ್ರೇಯಸ್ಸಿನ ಬದಲು ಪ್ರೆಯಸ್ಸಿನ ಮಾರ್ಗವನ್ನು ತುಳಿದವನು ತನ್ನ ಜೀವನದ ಅರ್ಥವನ್ನು ಕಳೆದುಕೊಳ್ಳುತ್ತಾನೆ ಮತ್ತು ಇಡೀ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾನೆ. 

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಸ್ತೌ ಸಂಪರೀತ್ಯ ವಿವಿನಕ್ತಿ ಧೀರಃ
ಶ್ರೇಯೋ ಹಿ ಧೀರೋಽಭಿಪ್ರೇಯಸೋ ವೃಣೀತೇ ಪ್ರೇಯೋ ಮಂದೋ ಯೋಗಕ್ಷೇಮಾದ್ವೃಣೀತೇ

ಸಾಮಾನ್ಯವಾಗಿ ಈ ಶ್ರೇಯಸ್ಸು ಮತ್ತು ಪ್ರೇಯಸ್ಸು ಮನುಷ್ಯನ ತಲೆಯಲ್ಲಿ ಕೂತು ಆತನನ್ನು ಕಾಡುತ್ತವೆ. ಆಗ ಬುದ್ಧಿವಂತನಾದವನು, ಯಾವುದು ಬೇಕು, ಯಾವುದು ಬೇಡ ಎಂದು ಚನ್ನಾಗಿ ವಿಶ್ಲೇಷಣೆ ಮಾಡಿ ವಿವೇಕದಿಂದ ತೀರ್ಮಾನ ತೆಗೆದುಕೊಳ್ಳುತ್ತಾನೆ. ಈತ ಧೈರ್ಯಶಾಲಿಯಾಗಿರುತ್ತಾನೆ. ನನಗೆ ಹಿತವಾದದ್ದು ಬೇಕು, ಇಷ್ಟವಾದದ್ದು ಬೇಡ, ನಾನು ಈ ಆಕರ್ಷಣೆಗೆ ಒಳಗಾಗಬಾರದು ಎನ್ನುವ  ವಿವೇಕ ಈತನಲ್ಲಿರುತ್ತದೆ. ಇದು ಬಹಳ ಕಷ್ಟ. ಸಾಮಾನ್ಯವಾಗಿ ಮನುಷ್ಯನಿಗೆ ಕೆಟ್ಟದ್ದು ಯಾವುದು ಎನ್ನುವುದು  ಗೊತ್ತಿರುತ್ತದೆ. ಆದರೆ ಗೊತ್ತಿದ್ದೂ ಆ ದಾರಿಯಲ್ಲಿ ಹೋಗಿ ಬಲಿ ಬೀಳುವವರೇ ಹೆಚ್ಚು. ಇದಕ್ಕೆ ಕಾರಣ ಪ್ರೇಯಸ್ಸಿನ ಸೆಳೆತ. ಜ್ಞಾನಿಯಾದವನು ಇಂಥಹ ಸೆಳೆತವನ್ನು ಮೀರಿ ನಾನು ಒಳ್ಳೆಯ ದಾರಿ ಹಿಡಿಯಬೇಕು ಎಂದು ತೀರ್ಮಾನ ಮಾಡಿ, ಧೈರ್ಯದಿಂದ ಶ್ರೇಯಸ್ಸಿನ ಮಾರ್ಗದಲ್ಲಿ ಸಾಗುತ್ತಾನೆ. ಆದರೆ ಬುದ್ಧಿಗೇಡಿ(ಮಂದ) ಪ್ರೇಯಸ್ಸಿನ ತಾತ್ಕಾಲಿಕ ಸೆಳೆತಕ್ಕೆ ಒಳಗಾಗಿ ತನ್ನ ಬಾಳನ್ನು ಹಾಳು ಮಾಡಿಕೊಳ್ಳುತ್ತಾನೆ. ಆತ ಜೀವನವೆಂದರೆ ಆದಾಯ-ವ್ಯಯ,  ಗಳಿಸುವುದು-ಗಳಿಸಿದ್ದನ್ನು ಉಳಿಸುವುದು-ಇಷ್ಟೇ ಎಂದು ತಿಳಿದು ಹಿತವಾದದ್ದನ್ನು ಬಿಟ್ಟು ಪ್ರಿಯವಾದುದರ ಬೆನ್ನು ಹತ್ತುತ್ತಾನೆ.
ಇಲ್ಲಿ ಯೋಗ-ಕ್ಷೇಮ ಎನ್ನುವ ಪದ ಬಳಕೆಯಾಗಿದೆ. ಇಲ್ಲದ್ದನ್ನು ಗಳಿಸುವುದು ಯೋಗ, ಗಳಿಸಿದ್ದನ್ನು ಉಳಿಸುವುದು ಕ್ಷೇಮ. ಅಪ್ರಾಪ್ತಸ್ಯ ಪ್ರಾಪ್ತಿಃ ಯೋಗಃ, ಪ್ರಾಪ್ತಸ್ಯ ಪರಿರಕ್ಷಣಂ ಕ್ಷೇಮಃ. ನಾವು ‘ಗಳಿಸಿದರೆ ಗಳಿಸಬೇಕು ಜ್ಞಾನವನ್ನು. ಉಳಿಸಿದರೆ ಉಳಿಸಬೇಕು ಯೋಗ ವಿದ್ಯೆಯನ್ನು’. ಇದನ್ನು ಬಿಟ್ಟು ಕೇವಲ ಹಣವನ್ನು ಗಳಿಸುವುದು ಮತ್ತು ಅದನ್ನು ಉಳಿಸುವುದು ಮಾಡುತ್ತಾ, ಇದ್ದ ಸುಖವನ್ನು ಮರೆತು, ಸುಖದ ನಿರೀಕ್ಷೆಯಲ್ಲೇ ಬದುಕಿದರೆ ಜೀವನ ವ್ಯರ್ಥ. ಇಲ್ಲಿ ನಚಿಕೇತ ಈ ಎಲ್ಲಾ ವಿಚಾರವನ್ನೂ ತಿಳಿದಿದ್ದ. ಆದ್ದರಿಂದ  ಆತ ಯಾವುದೇ ಪ್ರಲೋಭನೆಗೆ ಒಳಗಾಗಲಿಲ್ಲ.

ಸ ತ್ವಂ ಪ್ರಿಯಾನ್ ಪ್ರಿಯರೂಪಾಂಶ್ಚ ಕಾಮಾನ್ ಅಭಿಧ್ಯಾಯನ್ ನಚಿಕೇತೋಽತ್ಯಸ್ರಾಕ್ಷೀಃ
ನೈತಾಂ ಸೃಂಕಾಂ ವಿತ್ತಮಯೀಮವಾಪ್ತೋ ಯಸ್ಯಾಂ ಮಜ್ಜಂತಿ ಬಹವೋ ಮನುಷ್ಯಾಃ  

ಯಮ ಹೇಳುತ್ತಾನೆ: ಹೇಗೆ ಹೆಚ್ಚಿನ ಮನುಷ್ಯರು ಪ್ರಿಯವಾದುದರ ಹಿಂದೆ ಹೋಗುತ್ತಾರೋ ಹಾಗೆ ನೀನು ಹೋಗಲಿಲ್ಲ. ಪ್ರಿಯರೂಪವಾದ ಕಾಮನೆಗಳನ್ನು ಒಳ-ಹೊರಗು ಯೋಚನೆ ಮಾಡಿ ಅದರಲ್ಲಿರುವ ಗುಣದೋಷವನ್ನು ಧ್ಯಾನ ಮಾಡಿ, ಪ್ರೇಯಸ್ಸನ್ನು ಗುರುತಿಸಿ ಅದನ್ನು ತೊರೆದುಬಿಟ್ಟೆ. ನಾನು ಕೊಟ್ಟ ಬಂಗಾರದ ಹಾರವನ್ನೂ ಕೂಡ ನೀನು ಬೇಡವೆಂದೆ. ಮೆಚ್ಚತಕ್ಕಂತಹ  ಹಿರಿಮೆ ನಿನ್ನದು-ಎಂದು ಯಮ ನಚಿಕೇತನನ್ನು ಪ್ರಶಂಸಿಸುತ್ತಾನೆ.

No comments:

Post a Comment