Wednesday, July 11, 2012

Kathopanishad in Kannada Chapter-01 Canto-03 Shloka 12-14


ಏಷ ಸರ್ವೇಷು ಭೂತೇಷು ಗೂಢೋಽಽತ್ಮಾ ನ ಪ್ರಕಾಶತೇ
ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷ್ಮದರ್ಶಿಭಿಃ                 ೧೨

ಭಗವಂತ ಪ್ರತಿಯೊಬ್ಬನ ಒಳಗೂ, ಜೀವಸ್ವರೂಪದ  ಅತ್ಯಂತ ಸಮೀಪದಲ್ಲಿ, ನಿಗೂಢವಾಗಿ ನೆಲೆಸಿದ್ದಾನೆ. ನಮ್ಮೆಲ್ಲರ ಸ್ವಾಮಿ, ಅಂತರ್ಯಾಮಿ ಭಗವಂತನನ್ನು ಭೌತಿಕವಾದ ಯಾವುದೇ ಸಾಧನಗಳಿಂದ ಕಾಣಲು ಸಾಧ್ಯವಿಲ್ಲ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮ ಜೀವಸ್ವರೂಪವನ್ನು ತಿಳಿಯಬೇಕು. ಭಗವಂತ ನಮ್ಮ ಜೀವಸ್ವರೂಪದ ಸ್ವರೂಪಭೂತವಾದ ಬುದ್ಧಿಗೆ ಮಾತ್ರ ಗೋಚರವಾಗುತ್ತಾನೆ. ನಮ್ಮ ಸ್ವರೂಪಜ್ಞಾನ ತೆರೆದುಕೊಂಡಾಗ,  ಆ ಸ್ವರೂಪದ ತಿಳಿವಿನಿಂದ  ಭಗವಂತನನ್ನು ತಿಳಿಯಬಹುದು. “ಸೂಕ್ಷ್ಮಕ್ಕಿಂತ ಸೂಕ್ಷ್ಮನಾದ ಅಂತರ್ಯಾಮಿ ಭಗವಂತನನ್ನು, ಆತ್ಮಸ್ವರೂಪಭೂತವಾದ ಬುದ್ಧಿ ತೆರೆದುಕೊಂಡಾಗ ಕಾಣಬಹುದು” ಎಂದಿದ್ದಾನೆ ಯಮ. ಎಲ್ಲಕ್ಕಿಂತ ಸೂಕ್ಷ್ಮವಾದ ಜೀವಸ್ವರೂಪವನ್ನು ಕಂಡವರಿಗೆ, ಜೀವಸ್ವರೂಪದಲ್ಲಿರುವ ಜ್ಞಾನ ಆವಿರ್ಭಾವವಾಗುತ್ತದೆ ಹಾಗೂ ಆ ಜ್ಞಾನದ ಕಣ್ಣಿನಿಂದ ಅವರು ಭಗವಂತನನ್ನು ಕಾಣಬಲ್ಲರು. ಇದಕ್ಕಾಗಿ ಮೊದಲು ನಾವು ನಮ್ಮ ಜೀವಸ್ವರೂಪದ ಗ್ರಹಣ ಮಾಡಬೇಕು. ಜೀವಸ್ವರೂಪದ ದರ್ಶನವಾದರೆ, ಜೀವಸ್ವರೂಪದ ಜ್ಞಾನಾನಂದಮಯವಾದ ಕಣ್ಣಿನಿಂದ, ಜ್ಞಾನಾನಂದಮಯನಾದ ಭಗವಂತನನ್ನು ಕಾಣಬಹುದು.  

ಯಚ್ಛೇದ್ವಾಙ್ಮನಸೀ ಪ್ರಾಜ್ಞಸ್ತದ್ಯಚ್ಛೇಜ್ಜ್ಞಾನ ಆತ್ಮನಿ
ಜ್ಞಾನಮಾತ್ಮನಿ ಮಹತಿ ನಿಯಚ್ಛೇತ್ ತದ್ಯಚ್ಛೇಚ್ಛಾಂತ ಆತ್ಮನಿ            ೧೩

ಒಮ್ಮಿಂದೊಮ್ಮೆಗೆ  ಭಗವಂತನ ದರ್ಶನವಾಗಬೇಕು ಎಂದರೆ ಅದು ಸಾಧ್ಯವಿಲ್ಲ. ಅದಕ್ಕಾಗಿ ಇಲ್ಲಿ ಯಮ ಕೆಲವು ಹಂತಗಳನ್ನು ವಿವರಿಸಿದ್ದಾನೆ. ಮೊದಲು ನಮ್ಮನ್ನು ನಿಯಂತ್ರಿಸತಕ್ಕ ಉಚ್ಚ ಶಕ್ತಿಗಳನ್ನು ಅಂತರಂಗದಲ್ಲಿ ಧ್ಯಾನ ಮಾಡಬೇಕು. ಇಂದ್ರನ ತನಕ ಇರುವ ನಮ್ಮ ಎಲ್ಲಾ ಇಂದ್ರಿಯಾಭಿಮಾನಿ ದೇವತೆಗಳೂ ಕೂಡಾ ವಾಗ್ದೇವತೆ ಪಾರ್ವತಿಗೆ ಅಧೀನ ದೇವತೆಗಳು. ಹಾಗಾಗಿ ಇಂದ್ರಿಯಾಭಿಮಾನಿ ದೇವತೆಗಳನ್ನು ವಾಗ್ದೇವತೆ ಪಾರ್ವತಿಯಲ್ಲಿ ಚಿಂತನೆ ಮಾಡಬೇಕು. ಪಾರ್ವತಿ ಮನೋಭಿಮಾನಿ ದೇವತೆ ಶಿವನ ಅಧೀನ ದೇವತೆ. ಶಿವ ಮತ್ತು ಪಾರ್ವತಿ ದಂಪತಿಗಳು. ಇವರದ್ದು ಅನ್ಯೋನ್ಯ ದಾಂಪತ್ಯ. ಮನಸ್ಸು ಏನನ್ನು ಯೋಚಿಸುತ್ತದೋ ಅದನ್ನೇ ಬಾಯಿ ನುಡಿಯುತ್ತದೆ. ಆದ್ದರಿಂದ ಅಧ್ಯಾತ್ಮ ಸಾಧನೆಯಲ್ಲಿ ಮೊಟ್ಟಮೊದಲು ನಮ್ಮಿಂದ 'ನುಡಿಸುವ' ಪಾರ್ವತಿ ಮತ್ತು ಅದನ್ನು ಪ್ರೇರಣೆ ಮಾಡುವ ಶಿವನ ಧ್ಯಾನ ಬಹಳ ಮುಖ್ಯ. ಶಿವ-ಪಾರ್ವತಿಯರ ಅನುಗ್ರಹವಿಲ್ಲದೇ ಮುಂದಿನ ಪಯಣ ಸಾಧ್ಯವಿಲ್ಲ. [ಈ ಶ್ಲೋಕದಲ್ಲಿ ವಾಕ್ ನ್ನು ಮನಸ್ಸಿನಲ್ಲಿ ನಿಯಂತ್ರಣ ಮಾಡಬೇಕು ಎಂದು ಹೇಳಲಾಗಿದೆ. ಇದರ ಅರ್ಥ ಮೇಲೆ ವಿವರಿಸಿದ ಅಭಿಮಾನಿ ದೇವತೆಯರ ತಾರತಮ್ಯ ಚಿಂತನೆ.]
ಮನೋಭಿಮಾನಿಯಾದ ಶಿವನಿಗಿಂತ ಎತ್ತರದಲ್ಲಿ ಬುದ್ಧಿಯ ಅಭಿಮಾನಿ ದೇವತೆಯರಾದ ಸರಸ್ವತಿ-ಭಾರತಿಯರಿದ್ದಾರೆ. ಅವರು ನಮ್ಮೊಳಗಿರುವ, ನಮ್ಮ ನಿಯಾಮಕ ಶಕ್ತಿಗಳಾದ ಜ್ಞಾನಾತ್ಮರು. ಜ್ಞಾನ ಸ್ವರೂಪರೂಪರಾಗಿರುವ ಸರಸ್ವತಿ-ಭಾರತಿಯರನ್ನು ಮಹತತ್ವದ ದೇವತೆಗಳಾದ ಬ್ರಹ್ಮ-ವಾಯುವಿನಲ್ಲಿ ಚಿಂತನೆ ಮಾಡಬೇಕು. ಸರಸ್ವತಿ-ಭಾರತಿಯರು ಜ್ಞಾನವನ್ನು ಕೊಡಬೇಕು, ಬ್ರಹ್ಮ-ವಾಯು ಭಕ್ತಿಯನ್ನು ಕೊಡಬೇಕು. ಇಂತಹ ಬ್ರಹ್ಮ-ವಾಯುವನ್ನು ಸ್ವರೂಪಸುಖದ ಪರಾಕಾಷ್ಠೆಯಾದ ಭಗವಂತನಲ್ಲಿ ಚಿಂತನೆ ಮಾಡಬೇಕು. ಹೀಗೆ ಭಗವದ್ ಚಿಂತನೆ ಮಾಡುತ್ತಾ ಭಗವಂತನೆಡೆಗೆ ಹೆಜ್ಜೆ ಇಡಬೇಕು.
   
ಉತ್ತಿಷ್ಠತ ಜಾಗ್ರತ   ಪ್ರಾಪ್ಯ ವರಾನ್ ನಿಬೋಧತ
ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ ದುರ್ಗಂ ಪಥಸ್ತತ್ ಕವಯೋ ವದಂತಿ ೧೪

ಯಮನ ಉಪದೇಶವನ್ನು ನಚಿಕೇತನ ಜೊತೆಗೆ ಕೇಳುತ್ತಿರುವ ಎಲ್ಲರನ್ನು ಉದ್ದೇಶಿಸಿ ಯಮ ಹೇಳುತ್ತಾನೆ:  “ಏಳಿ, ಎದ್ದೇಳಿ, ಅಜ್ಞಾನವೆಂಬ ಹೊದಿಕೆಯನ್ನು ಹೊದ್ದುಕೊಂಡು ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ;  ಜ್ಞಾನಿಗಳಲ್ಲಿ ತಿಳುವಳಿಕೆಯ ವರವನ್ನು ಕೇಳಿ ಪಡೆಯಿರಿ” ಎಂದು. ಭಗವಂತನ ಕಡೆಗೆ ಸಾಗುವ ಮಾರ್ಗ ಬಹಳ ದುರ್ಗಮ. ಅದು ಕತ್ತಿಯ ಅಲುಗಿನ ಮೇಲಿನ ನಡೆಯಂತೆ. “ಇಂತಹ ಮಾರ್ಗದಲ್ಲಿನ ಕಷ್ಟಗಳನ್ನು ಸಹಿಸಿಕೊಂಡು ಮುನ್ನೆಡೆಯಬಲ್ಲವರು, ಭಗವಂತನನ್ನು ಸೇರಬಲ್ಲರು ಎಂದು ಜ್ಞಾನಿಗಳು ಹೇಳುತ್ತಾರೆ” ಎನ್ನುತ್ತಾನೆ ಯಮ. [ಈ ಶ್ಲೋಕದಲ್ಲಿ ಕವಿಗಳು ಎನ್ನುವ ಪದ ಬಳಕೆಯಾಗಿದೆ. ಇಲ್ಲಿ ಕವಿಗಳು ಎಂದರೆ: ಎಲ್ಲಾ ಶಬ್ದಗಳ ಅರ್ಥವನ್ನು ತಿಳಿದು ಪ್ರಯೋಗಿಸಬಲ್ಲ ಜ್ಞಾನಿಗಳು ಎಂದರ್ಥ].  ಆದ್ದರಿಂದ “ಅಜ್ಞಾನದ ನಿದ್ರೆ ಸಾಕು, ಮೈಕೊಡವಿ ಎದ್ದೇಳಿ, ಹೋಗುವ ಮಾರ್ಗ ದುರ್ಗಮವಾದರೂ ಹೋಗಿ ಸೇರಲೇಬೇಕಾದ ಆನಂದಸಾಗರದಿಂದ ವಂಚಿತರಾಗದಿರಿ” ಎಂದು ಇಲ್ಲಿ ಯಮ ಇಡೀ ಮಾನವ ಜನಾಂಗವನ್ನು ಎಚ್ಚರಿಸಿದ್ದಾನೆ.    

No comments:

Post a Comment