Friday, August 17, 2012

Kathopanishad in Kannada Chapter-02 Canto-03 Shloka-11-16


ತಾಂ ಯೋಗಮಿತಿ ಮನ್ಯಂತೇ ಸ್ಥಿರಾಮಿಂದ್ರಿಯಧಾರಣಾಮ್
ಅಪ್ರಮತ್ತಸ್ತದಾ ಭವತಿ ಯೋಗೋ ಹಿ ಪ್ರಭವಾಪ್ಯಯೌ                     ೧೧

ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳನ್ನು ಪೂರ್ಣವಾಗಿ ನಮ್ಮ ಹಿಡಿತದಲ್ಲಿಟ್ಟು ಭಗವಂತನನ್ನು ಕಾಣುವುದನ್ನು ಧ್ಯಾನಯೋಗ ಎನ್ನುತ್ತಾರೆ. ಈ ಸ್ಥಿತಿಯಲ್ಲಿರುವ ಜೀವ ಎಲ್ಲೂ ಪ್ರಮಾದ(ಎಚ್ಚರ ತಪ್ಪುವುದು, ತಿಳಿಯದೇ ತಪ್ಪು ಮಾಡುವುದು) ಮಾಡುವುದಿಲ್ಲ ಮತ್ತು ಆತ ದುಃಖದ ಸ್ಪರ್ಶವೇ ಇಲ್ಲದ ಸುಖವನ್ನು ಅನುಭವಿಸುತ್ತಾನೆ. ಇದು ಆನಂದ ಸಮುದ್ರದಲ್ಲಿ ಮುಳುಗುವ ಅನುಭವ. ಇಂತಹ ಸುಖ ಕೇವಲ ಧ್ಯಾನಯೋಗದಿಂದ ಮಾತ್ರ ಪಡೆಯಲು ಸಾಧ್ಯ. ಜಗತ್ತಿನ ಸೃಷ್ಟಿ-ಸಂಹಾರಕ್ಕೆ ಕಾರಣನಾದ ಆ ಭಗವಂತನನ್ನು ನಮ್ಮ ಒಳಗಣ್ಣಿನಿಂದ ಕಂಡಾಗ ಆನಂದದ ಸೃಷ್ಟಿಯಾಗುತ್ತದೆ ಮತ್ತು ದುಃಖದ ಸಂಹಾರವಾಗುತ್ತದೆ. ಇದನ್ನು ನಾಲ್ಕನೇ ಸ್ಥಿತಿ ಅಥವಾ ತುರಿಯಾವಸ್ಥೆ ಎಂದೂ ಕರೆಯುತ್ತಾರೆ.

ನೈವ ವಾಚಾ ನ ಮನಸಾ ಪ್ರಾಪ್ತುಂ ಶಕ್ಯೋ ನ ಚಕ್ಷುಷಾ
ಅಸ್ತೀತಿ ಬ್ರುವತೋಽನ್ಯತ್ರ ಕಥಂ ತದುಪಲಭ್ಯತೇ                            ೧೨

ಒಂದು ವಿಶೇಷವಾದ ಉಪಾಸನೆಯನ್ನು ಇಲ್ಲಿ ವಿವರಿಸಲಾಗಿದೆ. ಗೀತೆಯಲ್ಲಿ ಒಂದು ಮಾತು ಬಂದಿದೆ: ಓಂ ತತ್ ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ । [೧೭-೨೩]. ಇದು ಭಗವಂತನ ಉಪಾಸನೆಯಲ್ಲಿ ಅವನನ್ನು ‘ಸತ್’ ಎಂದು ಉಪಾಸನೆ ಮಾಡುವುದನ್ನು ವಿವರಿಸುತ್ತದೆ. ಇಲ್ಲಿ ‘ಸತ್’ ಎನ್ನುವ ಉಪಾಸನೆಯ ಒಂದು ವಿಶೇಷ ಮುಖವನ್ನು ವಿವರಿಸಿದ್ದಾನೆ ಯಮ.
ಭಗವಂತನನ್ನು ಮಾತಿನ ಮೂಲಕ ತಿಳಿಯಲು ಸಾಧ್ಯವಿಲ್ಲ. ಗುರುಗಳ ಉಪದೇಶ ಕೂಡಾ ನೇರವಾಗಿ ಭಗವಂತನನ್ನು ತೋರಿಸಲಾರದು. ಪ್ರವಚನ ಕೇಳಿದಾಗ ಅದರಿಂದ ಭಗವಂತನನ್ನು ಹೇಗೆ ಉಪಾಸನೆ ಮಾಡಬೇಕು ಎನ್ನುವ ಮಾರ್ಗದರ್ಶನವಷ್ಟೇ ಸಿಗುತ್ತದೆ ಹೊರತು, ಅದರಿಂದ ದೇವರು ಕಾಣಿಸಿಕೊಳ್ಳುವುದಿಲ್ಲ. ಸಾಂತವಾದ ಮಾತು ಮತ್ತು ಮನಸ್ಸುಗಳಿಗೆ ಅನಂತವಾದ ಭಗವಂತನನ್ನು ಗ್ರಹಿಸಲು ಸಾಧ್ಯವಿಲ್ಲ. ಹೀಗಿರುವಾಗ ನಮ್ಮ ಕಣ್ಣಿನಿಂದ ಅವನನ್ನು ಕಾಣುವುದು ಸಾಧ್ಯವೇ? ಎಂದು ಪ್ರಶ್ನಿಸುತ್ತಾನೆ ಯಮ. ಇಂತಹ ಭಗವಂತನನ್ನು ಯಾರು ಕಾಣಬಲ್ಲರು ಎಂದರೆ ಯಮ ಹೇಳುತ್ತಾನೆ: “ಅಸ್ತೀತಿ ಬ್ರುವತಃ” ಎಂದು. ಅಂದರೆ: ‘ಭಗವಂತ ಇದ್ದಾನೆ’ ಎಂದು ಹೇಳುವವರು ಕಾಣಬಲ್ಲರು ಎಂದರ್ಥ. ಯಾರು ದೇವರು ಇಲ್ಲಾ ಎನ್ನುತ್ತಾನೋ, ಅವನ ಪಾಲಿಗೆ ದೇವರು ಖಂಡಿತಾ ಗೋಚರನಾಗುವುದಿಲ್ಲ. ದೇವರು ಇದ್ದಾನೆ ಎನ್ನುವ ಭಾವ ಒಳಗಿನಿಂದ ದೃಢವಾಗುವ ತನಕ ಏನೇ ಸಾಧನೆ ಮಾಡಿದರೂ ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ಹಾಗಾಗಿ ಮೊದಲು ದೇವರು ಇದ್ದಾನೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಬೇಕು. ಗಟ್ಟಿಯಾದ ನಂತರ ಅವನನ್ನು ತಿಳಿಯಲು ಪ್ರಯತ್ನ ಮಾಡಬೇಕು.
ಭಗವಂತ ‘ಅಸ್ತಿಃ=ಅ+ಸತ್+ಇ’ ಇಲ್ಲಿ ‘ಅ’ ಎನ್ನುವುದು ‘ಅಧಿಕ’ ಎನ್ನುವುದರ ಸಂಕ್ಷಿಪ್ತರೂಪ(Abbreviations). ಅಧಿಕ ಎಂದರೆ ದೊಡ್ಡವನು, ಮೇಲಿನವನು, ಎತ್ತರದಲ್ಲಿರುವವನು, ಇತ್ಯಾದಿ. ಆದ್ದರಿಂದ ಇಲ್ಲಿ ಅಸ್ತಿಃ ಎಂದರೆ: ಈ ಜಗತ್ತಿನಲ್ಲಿ ನಮಗೆ ತಿಳಿದಿರುವ/ತಿಳಿಯದಿರುವ  ಯಾವ ಯಾವ ವಸ್ತುಗಳಿವೆ, ಆ ಎಲ್ಲಾ ವಸ್ತುಗಳಿಗಿಂತ ಭಗವಂತ ಅಧಿಕ ಎಂದರ್ಥ. ಯಾರು ಭಗವಂತನನ್ನು ‘ಅಸ್ತಿಃ’ ಎಂದು ತಿಳಿದಿದ್ದಾರೋ, ಅವರು ಭಗವಂತನನ್ನು ಕಾಣಬಲ್ಲರು.

ಅಸ್ತೀತ್ಯೇವೋಪಲಬ್ಧವ್ಯಸ್ತತ್ತ್ವಭಾವೇನ ಚೋಭಯೋಃ
ಅಸ್ತೀತ್ಯೇವೋಪಲಬ್ಧಸ್ಯ ತತ್ತ್ವಭಾವಃ ಪ್ರಸೀದತಿ                               ೧೩

ಅನಂತನಾದ ಭಗವಂತನನ್ನು ಸಾಂತರಾದ ನಾವು ತಿಳಿಯುವುದು ಹೇಗೆ ಎಂದರೆ ಯಮ ಹೇಳುತ್ತಾನೆ: “ಭಗವಂತ ಎಲ್ಲಕ್ಕಿಂತ ವಿಲಕ್ಷಣ ಮತ್ತು ಎಲ್ಲಕ್ಕಿಂತ ಅಧಿಕ ಎಂದು ಗ್ರಹಣ ಮಾಡಬೇಕು” ಎಂದು. ಈ ಜಗತ್ತಿನಲ್ಲಿ ಇರುವ ತತ್ವ ಎರಡೇ. ಒಂದು ಜಡ ಮತ್ತು ಒಂದು ಚೇತನ ಅಥವಾ ಒಂದು ಕ್ಷರ ಒಂದು ಅಕ್ಷರ ಅಥವಾ ಒಂದು ಚರ ಒಂದು ಅಚರ. ಈ ಎರಡು ತತ್ವವನ್ನು ನಿಯಂತ್ರಿಸುವ ಮಹಾತತ್ವ ಆ ಪರಮ ಪುರುಷ ಭಗವಂತ. ಹೀಗಾಗಿ ಆತ ಎಲ್ಲಕ್ಕಿಂತ ಅಧಿಕ. ಭಗವಂತನೊಬ್ಬನೇ ಸ್ವತಂತ್ರತತ್ವ. ಉಳಿದಿದ್ದೆಲ್ಲವೂ ಆತನಿಗೆ ಅಧೀನ.
‘ಭಗವಂತ ಚರಾಚರಗಳಿಗಿಂತ ಅಧಿಕನಾಗಿ, ಚರಾಚರ ಪ್ರಪಂಚವನ್ನು ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳಿಂದ ನಿಯಂತ್ರಿಸುತ್ತಾನೆ’ ಎನ್ನುವ ಜ್ಞಾನ ಯಾರಿಗೆ ಬಂತೋ, ಅವರಿಗೆ ಭಗವಂತ ಪ್ರಸನ್ನನಾಗುತ್ತಾನೆ. ಹಾಗಾಗಿ ‘ಭಗವಂತ ಸಮಸ್ತ ಪ್ರಪಂಚವನ್ನು ನಿಯಮಿಸಿಕೊಂಡು ಎಲ್ಲವುದಕ್ಕಿಂತ ಮೇಲೆ ಸರ್ವೋತ್ತಮನಾಗಿದ್ದಾನೆ’ ಎನ್ನುವ ಎಚ್ಚರವೇ ಭಗವಂತನ ಕೃಪೆಗೆ ಪಾತ್ರರಾಗಲು ಇರುವ ಏಕಮಾತ್ರ ಮಾರ್ಗ.

ಯದಾ ಸರ್ವೇ ಪ್ರಮುಚ್ಯಂತೇ ಕಾಮಾ ಯೇಽಸ್ಯ ಹೃದಿ ಶ್ರಿತಾಃ
ಅಥ ಮರ್ತ್ಯೋಽಮೃತೋ ಭವತ್ಯತ್ರ ಬ್ರಹ್ಮ ಸಮಶ್ನುತೇ                   ೧೪

ಹಿಂದಿನ ಶ್ಲೋಕದಲ್ಲಿ ಯಮ ಹೇಳಿದ: ನಾವು ಭಗವಂತನ ಸರ್ವೋತ್ತಮತ್ತ್ವವನ್ನು ತಿಳಿದಾಗ ಆತ ಪ್ರಸನ್ನನಾಗುತ್ತಾನೆ” ಎಂದು. ಇಲ್ಲಿ ನಮಗೊಂದು ಪ್ರಶ್ನೆ ಬರಬಹುದು. “ಭಗವಂತನ ಅನುಗ್ರಹ ನಮ್ಮ ಮೇಲೆ ಆಗುವುದು ನಮಗೆ ತಿಳಿಯುವುದು ಹೇಗೆ” ಎಂದು. ಈ ನಮ್ಮ ಪ್ರಶ್ನೆಗೆ ಈ ಶ್ಲೋಕವೇ ಉತ್ತರ. ಯಮ ಹೇಳುತ್ತಾನೆ: “ಭಗವಂತ ನಮ್ಮ ಮೇಲೆ ಪ್ರಸನ್ನನಾದಾಗ ನಮ್ಮ ಲೌಕಿಕವಾದ ಎಲ್ಲಾ ಕ್ಷುದ್ರ ಕಾಮನೆಗಳು ಹೊರಟು ಹೋಗುತ್ತವೆ” ಎಂದು. ಈ ಸ್ಥಿತಿಯಲ್ಲಿ ನಮಗೆ ಕೇವಲ ನಮ್ಮ ಆತ್ಮಸ್ವರೂಪದ ಬಯಕೆಗಳಾದ ಜ್ಞಾನ, ಭಕ್ತಿ, ವೈರಾಗ್ಯ, ಭಗವಂತ ಇಷ್ಟೇ ಇರುತ್ತವೆ. ಇಂತಹ ಸ್ಥಿತಿಯನ್ನು ತಲುಪಿದ ಜೀವ ಸಾವಿಲ್ಲದ ಪೂರ್ಣಾನಂದ ಸ್ಥಿತಿಯನ್ನು ಪಡೆಯುತ್ತಾನೆ.  

ಯದಾ ಸರ್ವೇ ಪ್ರಭಿದ್ಯಂತೇ ಹೃದಯಸ್ಯೇಹ ಗ್ರಂಥಯಃ
ಅಥ ಮರ್ತ್ಯೋಽಮೃತೋ ಭವತ್ಯೇತಾವದ್ಧ್ಯನುಶಾಸನಮ್               ೧೫

ಭಗವಂತನ ಅನುಗ್ರಹದಿಂದ ಹೇಗೆ ನಮ್ಮ ಬಯಕೆಗಳೆಲ್ಲಾ ಕರಗಿ ಹೋಗುತ್ತವೆಯೋ, ಹಾಗೇ ನಮ್ಮ ಹೃದಯದಲ್ಲಿ ಹುದುಗಿರುವ ಅಜ್ಞಾನದ ಗಂಟುಗಳೂ ಕರಗಿ ಹೋಗುತ್ತವೆ ಮತ್ತು ನಮ್ಮೊಳಗೆ ಜ್ಞಾನದ ಬೆಳಕು ತುಂಬುತ್ತದೆ. ಈ ಸ್ಥಿತಿಯಲ್ಲಿ ಏನನ್ನಾದರೂ ಬಯಸಬೇಕು ಅನಿಸುವುದೇ ಇಲ್ಲ. ಕೊಪ ಇಲ್ಲವಾಗುತ್ತದೆ, ಲೋಭ ಕಾಣೆಯಾಗುತ್ತದೆ. ಹೀಗೆ ಎಲ್ಲಾ ಮಾನಸಿಕ ದೌರ್ಬಲ್ಯಗಳನ್ನು ಕಳೆದುಕೊಂಡ ಮನುಷ್ಯ, ಭಗವಂತನ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ. ಈ ಸ್ಥಿತಿಯನ್ನು ತಲುಪಿದ ಸಿದ್ಧನಿಗೆ  ಯಾವ ಶಾಸ್ತ್ರದ ಅನುಶಾಸನಗಳೂ ಇಲ್ಲ.  ಅಂತವನು ಮೋಕ್ಷವನ್ನು ಪಡೆಯುತ್ತಾನೆ.

ಶತಂ ಚೈಕಾ ಚ ಹೃದಯಸ್ಯ ನಾಡ್ಯಸ್ತಾಸಾಂ ಮೂರ್ಧಾನಮಭಿನಿಃಸೃತೈಕಾ
ತಯೋರ್ಧ್ವಮಾಯನ್ನಮೃತತ್ವಮೇತಿ ವಿಷ್ವಙ್ಙನ್ಯಾ ಉತ್ಕ್ರಮಣೇ ಭವಂತಿ         ೧೬

ಜೀವ ತನ್ನ ದೇಹವನ್ನು ಕಳಚಿ ಮೋಕ್ಷಕ್ಕೆ ಹೋಗುವ ಪ್ರಕ್ರಿಯೆಯನ್ನು ಯಮ ಇಲ್ಲಿ ವಿವರಿಸಿದ್ದಾನೆ. ನಮ್ಮ ದೇಹದ ಎಡಭಾಗದಲ್ಲಿ ಐವತ್ತು ಮತ್ತು ಬಲಭಾಗದಲ್ಲಿ ಐವತ್ತು ಮುಖ್ಯ ನಾಡಿಗಳಿವೆ. ನಡುವಿನಲ್ಲಿ ಹೃದಯದಿಂದ ಮೇಲೆ ಹೋಗುವ ಸುಷುಮ್ನಾ ಅಥವಾ ಬ್ರಹ್ಮನಾಡಿ ಇದೆ. ಅದರ ತುದಿ ನಮ್ಮ ನೆತ್ತಿಯಲ್ಲಿದೆ. ಅದನ್ನೇ ಸಹಸ್ರಾರ ಎನ್ನುತ್ತಾರೆ. ಈ ನಾಡಿಯ ಮೂಲಕ, ಸಹಸ್ರಾರದಿಂದ ಜೀವ ದೇಹದಿಂದ ಹೊರ ಹೋದರೆ, ಆ ಜೀವ ಮತ್ತೆ ಮರಳಿ ಹುಟ್ಟುವುದಿಲ್ಲ. ಇದು ಜೀವ  ಹುಟ್ಟು ಸಾವಿನ ಚಕ್ರದಿಂದ ಕಳಚಿಕೊಂಡು ಮೋಕ್ಷವನ್ನು ಸೇರುವ ಮಾರ್ಗ.  ದೇಹದಲ್ಲಿನ ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗಿರುತ್ತವೆ. ಅಂದರೆ ಸಹಸ್ರಾರವಲ್ಲದೇ ದೇಹದ ಇತರ ಯಾವುದೇ ದ್ವಾರದ ಮೂಲಕ ಜೀವ ಹೊರ ಹೋದರೂ, ಮರಳಿ ಸಂಸಾರ ಚಕ್ರದಲ್ಲಿ ಸಿಲುಕುತ್ತಾನೆ.

No comments:

Post a Comment